ಪೀಸಾ
ಇಟಲಿ ಗಣರಾಜ್ಯದ ಟಸ್ಕನಿಯಲ್ಲಿರುವ ಒಂದು ನಗರ ; ಅದೇ ಹೆಸರಿನ ಆಡಳಿತ ವಿಭಾಗ (ಕಮ್ಯೂನ್). ಪೀಸಾ ನಗರ ಫ್ಲಾರೆನ್ಸ್‍ನ ನೈಋತ್ಯಕ್ಕೆ 69 ಕಿ.ಮೀ. ದೂರದಲ್ಲಿ, ಆರ್ಸೋ ನದಿಯ ಉತ್ತರ ದಂಡೆಯ ಮೇಲೆ, ಲಿಗೊರಿಯನ್ ಸಮುದ್ರದಿಂದ 10 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 1,02,717 (1968). ರೋಮ್ ಚಕ್ರಾಧಿಪತ್ಯ ಲಿಗುರೀಯದ ದಾಳಿಗಳನ್ನು ತಡೆಯಲು ಪೀಸಾದಲ್ಲಿ ವಸಾಹತು ಸ್ಥಾಪಿಸಿ, ಕೋಟೆ ಕಟ್ಟಿಸಿ, ನೌಕಾಪಡೆಯನ್ನಿರಿಸಿತು. (ಕ್ರಿ. ಪೂ. 180). ರೋಮನರು ನಿರ್ಮಿಸಿದ ನಾಟಕರಂಗ, ಸ್ನಾನಘಟ್ಟ ಮತ್ತು ಬೃಹತ್ ಕಟ್ಟಡಗಳ ಅವಶೇಷಗಳು ಈಗಲೂ ಇವೆ. ಕ್ರಿ. ಪೂ. 89 ರಲ್ಲಿ ಅಲ್ಲಿಯ ಜನರಿಗೆ ರೋಮನ್ ನಾಗರಿಕ ಹಕ್ಕುಗಳನ್ನು ನೀಡಲಾಯಿತು. ಕ್ರಿ. ಶ. 313 ರ ಹೊತ್ತಿಗೆ ನಗರದಲ್ಲಿ ಕ್ರೈಸ್ತಧರ್ಮ ಪ್ರಚಾರಕ್ಕೆ ಬಂತು. ಬಿಷಪನ ನೇಮಕವಾಯಿತು. 4 ಹಾಗೂ 5 ನೆಯ ಶತಮಾನಗಳಲ್ಲಿ ರೋಮ್ ಚಕ್ರಾಧಿಪತ್ಯದ ವಿಘಟನೆಯಿಂದಾಗಿ ಪೀಸಾದ ಪ್ರಾಮುಖ್ಯ ಇಳಿಯಿತು. 9 ನೆಯ ಶತಮಾನದಲ್ಲಿ ಸಾರಸನರ ದಾಳಿಗಳಿಂದ ಇಲ್ಲಿಯ ವಾಣಿಜ್ಯಕ್ಕೆ ನಷ್ಟ ಸಂಭವಿಸಿತು. 10 ನೆಯ ಶತಮಾನದಲ್ಲಿ ಇದು ಟಸ್ಕನಿ ಪ್ರಾಂತ್ಯದ ಮುಖ್ಯ ನಗರವಾಗಿತ್ತು. ಪೀಸಾ 1063 ರಲ್ಲಿ ಸಾರಸನರನ್ನು ಪಾಲ್ಮೆರೊ ಬಳಿ ಸೋಲಿಸಿತು. 1100 ರಲ್ಲಿ ಈ ನಗರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇದರ ಜನಸಂಖ್ಯೆ 1,50,000 ಆಗಿತ್ತು. 13 ನೆಯ ಶತಮಾನದಲ್ಲಿ ಜಿನೋವ, ಲೂಕ್ಕಾ ಹಾಗೂ ಫ್ಲಾನ್‍ರೆನ್ಸ್ ಸೈನ್ಯಗಳ ದಾಳಿಗಳಿಂದ ಇದನ್ನು ಜರ್ಮನ್ ಸಾಮ್ರಾಟರು ರಕ್ಷಿಸಿದರು. ಕೊನೆಯಲ್ಲಿ ಜಿನೋವದ ನೌಕಾಪಡೆ ಇದನ್ನು ಮೆಲೋರಿಯ ಬಳಿ ಸೋಲಿಸಿತು (1284). 1325 ರಲ್ಲಿ ಇದು ಅರಗಾನ್ ರಾಜ್ಯದ ವಶವಾಯಿತು. 1348 ರಲ್ಲಿ ಪ್ಲೇಗ್ ರೋಗದಿಂದ ಇಲ್ಲಿ ಭಾರಿ ನಷ್ಟವಾಯಿತು. 1466 ರಲ್ಲಿ ಇದು ಫ್ಲಾರೆನ್ಸ್ ದೇಶಕ್ಕೆ ಮಾರಾಟವಾಯಿತು. 1494 ರಿಂದ 1509 ರ ವರೆಗೆ ನಡೆದ ಯುದ್ಧಗಳಿಂದ ಈ ನಗರ ಕ್ಷೀಣಿಸಿತು. 1860 ರಲ್ಲಿ ಇದು ಇಟಲಿ ರಾಜ್ಯದ ಭಾಗವಾಯಿತು.

ನೆರೆಹೊರೆಯ ದೇಶಗಳ ದಾಳಿಗಳಿಂದ ನಷ್ಟಕ್ಕೀಡಾದರೂ ಪೀಸಾ 13 ನೆಯ ಶತಮಾನದಲ್ಲಿ ಆರ್ಥಿಕವಾಗಿ ಮುನ್ನಡೆಯಿತು. ನಗರದ ಏಳಿಗೆಯ ಫಲವಾಗಿ ಪ್ರಸಿದ್ಧ ಶಿಲ್ಪಿಗಳಿಂದ ವಿಶ್ವವಿಖ್ಯಾತ ಕಟ್ಟಡಗಳ ರಚನೆಯಾಯಿತು. ಅವುಗಳಲ್ಲಿ ಪ್ರಧಾನವಾದವು ಕಾಂಪಾನೀಲೆ ಹಾಗೂ ಬ್ಯಾಪ್ಟಿಸ್ಟ್ರಿ. ಕಾಂಪಾನೀಲೆ ಕಟ್ಟಡ ಪೀಸಾ ನಗರದ ವಾಲುಗೋಪುರ ಎನಿಸಿಕೊಂಡಿದೆ. ಅದರ ಎತ್ತರ 56 ಮೀ. ಕಟ್ಟಡದ ನಿರ್ಮಾಣ ಬ್ಯೂನಾನೊ ಪಿಸಾನೊ ಎಂಬ ಶಿಲ್ಪಿಯಿಂದ 1174 ರಲ್ಲಿ ಪ್ರಾರಂಭವಾಗಿ, 14 ನೆಯ ಶತಮಾನದಲ್ಲಿ ಪೂರ್ಣಗೊಂಡಿತು. ಕಟ್ಟಡ ಅಮೃತಶಿಲೆಯಲ್ಲಿ ರೋಮನ್ ಹಾಗೂ ಗಾತಿಕ್ ಶೈಲಿಯಲ್ಲಿ ರಚಿತವಾಗಿದೆ. ವೃತ್ತಾಕಾರದಲ್ಲಿ ಕಟ್ಟಿರುವ ಬ್ಯಾಪ್ಟಿಸ್ಟ್ರಿ ಚರ್ಚ್ ಕಟ್ಟಡದ ಎತ್ತರ 58 ಮೀ., ವ್ಯಾಸ 30.5 ಮೀ. ಈ ಕಟ್ಟಡದ ನಿರ್ಮಾಣ 1132 ರಲ್ಲಿ ಶಿಲ್ಪಿ ಡಿಯೋಟಿಸಾಲ್ವಿ ಎಂಬಾತನಿಂದ ಪ್ರಾರಂಭವಾಗಿ 14 ನೆಯ ಶತಮಾನದಲ್ಲಿ ಪೂರ್ಣಗೊಂಡಿತು.

ಪೀಸಾ ಪ್ರಸಿದ್ಧ ವಿಜ್ಞಾನಿ ಗೆಲಿಲಿಯೋ ಹುಟ್ಟಿದ ಸ್ಥಳ. ನಗರದಲ್ಲಿ ಪ್ರಾಚೀನ ವಿಶ್ವವಿದ್ಯಾನಿಲಯವಿದೆ. (1313). ಆಧುನಿಕ ನಗರ ಕೈಗಾರಿಕೆಗಳ ಕೇಂದ್ರವಾಗಿದೆ. ಇಲ್ಲಿಯ ಪ್ರಧಾನ ಕೈಗಾರಿಕೆಗಳು ಜವಳಿ, ಗಾಜು ಹಾಗೂ ಯಂತ್ರೋಪಕರಣ ತಯಾರಿಕೆ. ಇದೊಂದು ರೈಲ್ವೇ ಜಂಕ್ಷನ್. ಎರಡನೆಯ ಮಹಾಯುದ್ಧದಲ್ಲಿ ವಿಮಾನ ದಾಳಿಗಳಿಂದ ನಗರಕ್ಕೆ ಬಹಳ ನಷ್ಟವಾಯಿತು (1944). ಅದರಿಂದ ನಗರದ ಹಿಂದಿನ ಸೊಬಗು ಕ್ಷೀಣಿಸಿತು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ